Search...

ಕನ್ನಡ ಓದುಗೂಡು - ೨೦೨೩ @ ಪಿಇಎಸ್ ವಿಶ್ವವಿದ್ಯಾಲಯದಲ್ಲಿ

ಕನ್ನಡ ಓದುಗೂಡು - ೨೦೨೩ @ ಪಿಇಎಸ್ ವಿಶ್ವವಿದ್ಯಾಲಯದಲ್ಲಿ

ಮಾರ್ಚ್ ೧, ೨೦೨೩ ರಂದು ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಕನ್ನಡ ಓದುಗೂಡು ಎಂಬ ಕಪಾಟಿನ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಒಲವು ಮೂಡಿಸುವುದು, ಓದುವ ಹವ್ಯಾಸವಿರುವವರನ್ನು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಈ ಸದುದ್ದೇಶದಿಂದ ಕನ್ನಡ ಕೂಟ ವು ಪಿಇಎಸ್ ವಿಶ್ವವಿದ್ಯಾಲಯದ ಜಿ.ಜೇ.ಬಿ. ಬ್ಲಾಕ್ ನಲ್ಲಿ ಕನ್ನಡ ಓದುಗೂಡು ಎಂಬ ವಿಶೇಷ ಕಾರ್ಯಕ್ರಮಕ್ಕೆ ನಾಂದಿಹಾಡಿತು. ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಕನ್ನಡ ಕೂಟದ ಸದಸ್ಯರು ಕೊಡುಗೆಯಾಗಿ ನೀಡಿದ ೨೦೦ಕ್ಕೂ ಅಧಿಕ ಪುಸ್ತಕಗಳನ್ನು ಕಪಾಟಿನಲ್ಲಿ ಇರಿಸಲಾಗಿದೆ.ಈ ಕಾರ್ಯಕ್ರಮಕ್ಕೆ ಪಿಇಎಸ್ ವಿಶ್ವವಿದ್ಯಾಲಯದ ಕುಲಸಚಿವರು ಡಾ. ಕೆ .ಎಸ್. ಶ್ರೀಧರ್, ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ. ವಿ. ಕೃಷ್ಣ, ಗ್ರಂಥಾಲಯದ ಮುಖ್ಯಸ್ಥರಾದ ಡಾ. ಸುಭಾಷ್, ಕನ್ನಡ ಪ್ರಾಧ್ಯಾಪಕರು ಡಾ.ನಂದಾ, ಪ್ರದರ್ಶನ ಕಲೆಗಳ ವಿಭಾಗದ ಮುಖ್ಯಸ್ಥರು ಡಾ. ಸುಷ್ಮಾ ವಿ, ಪ್ರದರ್ಶನ ಕಲೆಗಳ ವಿಭಾಗದ ಪ್ರಾಧ್ಯಾಪಕರು ಪ್ರೊ.ಅನುಷಾ ಅವರು ಹಾಗೂ ಕನ್ನಡ ಕೂಟದ ಸಿಬ್ಬಂದಿ ಸಲಹೆಗಾರರಾದ ವಾದಿರಾಜ ಆಚಾರ್ಯ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಮುಖ್ಯ ಅತಿಥಿಗಳು ಓದುಗೂಡನ್ನು ಅವರ ಹಸ್ತಗಳಿಂದ ಉದ್ಘಾಟಿಸಿದರು. ಡಾ. ಕೆ. ಎಸ್. ಶ್ರೀಧರ್ ಅವರು ಮಾತೃಭಾಷೆಯ ಮೇಲೆ ಅಭಿಮಾನವಿರಬೇಕೆ ಹೊರತು ದುರಭಿಮಾನವಲ್ಲ, ಕನ್ನಡದ ಜೊತೆಗೆ ಬೇರೆ ಭಾಷೆಗಳನ್ನು ಗೌರವಿಸುತ್ತಾ ಕನ್ನಡದ ಏಳಿಗೆಗಾಗಿ ಶ್ರಮಿಸೋಣ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರನ್ನು ಉದ್ದೇಶಿಸಿ ಮಾತನಾಡಿದರು. ಸಸಿಯಾಗಿ ಮೊಳಕೆ ಒಡೆದ ಕನ್ನಡ ಕೂಟ ಈಗ ಹೆಮ್ಮರವಾಗಿ ಬೆಳೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ ಡಾ. ವಿ. ಕೃಷ್ಣ ಅವರು ಕನ್ನಡದ ಅಭಿವೃದ್ಧಿಗಾಗಿ ಪಿಇಎಸ್ ವಿಶ್ವವಿದ್ಯಾಲಯವು ಸದಾ ಬೆಂಬಲಿಸುವುದಾಗಿ ಭರವಸೆ ನೀಡಿದರು. ಇದರ ಜೊತೆಗೆ ಕನ್ನಡ ಕೂಟವು ಸಾಂಸ್ಕೃತಿಕವಾಗಿ, ವೈಜ್ಞಾನಿಕವಾಗಿ ಕನ್ನಡವನ್ನು ಪ್ರತಿನಿಧಿಸುತ್ತ ಭಿನ್ನತೆ ಮೆರೆದಿದೆ ಎಂದು ಶ್ಲಾಘಿಸಿದರು.ಇತರೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ನಂದಾ, ಡಾ. ಸುಷ್ಮಾ ವಿ ಹಾಗೂ ಪ್ರೊ. ಅನುಷಾ ಅವರು ಬೇರೆ ದೇಶಗಳಲ್ಲಿ ಕನ್ನಡ ಸಂಘಗಳ ಬೆಳವಣಿಗೆಯ ಕುರಿತು, ವಿಭಿನ್ನ ರೀತಿಯ ಕನ್ನಡ ಭಾಷೆಗಳ ಕುರಿತು ಮಾಹಿತಿ ನೀಡಿದರು. ಪ್ರೊ. ವಾದಿರಾಜ ಆಚಾರ್ಯ ಅವರು ಹಾಗೂ ಡಾ. ಸುಭಾಷ್ ಅವರು ಕಾರ್ಯಕ್ರಮದ ಕುರಿತು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ನಮ್ಮದೇ ಕಾಲೇಜಿನ ವಿದ್ಯಾರ್ಥಿಯಾದ ಸೂರಜ್ ಕೆ. ಎಂ. ತನ್ನ ಸುಮಧುರ ಕಂಠದಿಂದ ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ ಎಂದು ಹಾಡಿನೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.