Search...

ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಅದ್ಧೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಆಚರಣೆ

ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಅದ್ಧೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಆಚರಣೆ

ಪಿಇಎಸ್ ವಿಶ್ವವಿದ್ಯಾಲಯದ ಕನ್ನಡ ಕೂಟವು ವಿದ್ಯಾರ್ಥಿಗಳಲ್ಲಿ ಕನ್ನಡ ನಾಡು-ನುಡಿಯ ಮೇಲೆ ಅಭಿಮಾನ ಬೆಳೆಸಿ ಕರ್ನಾಟಕದ ಮಹಾನ್ ಸಾಧಕ ಸಾಧಕಿಯರ ಬಗ್ಗೆ ತಿಳಿಸಿ ಹಾಗೂ ಕರ್ನಾಟಕ ರಾಜ್ಯೋತ್ಸವವನ್ನು ನಾಡ ಹಬ್ಬದ ರೀತಿ ಆಚರಿಸಿ ತಾಯ್ನುಡಿಯ ಮೇಲೆ ಅಭಿಮಾನವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಈ ಕೂಟವು ಸಾಂಸ್ಕೃತಿಕ ಹಾಗೂ ತಾಂತ್ರಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಮೂಡಿಸುವ ಜೊತೆಗೆ ಅವರ ಪ್ರತಿಭೆಗೆ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ. ಕನ್ನಡ ಕೂಟವು ಕನ್ನಡ ನಾಡು ನುಡಿಯ ಬಗ್ಗೆ ಕಾಳಜಿ ಇರುವ ನಿಷ್ಠಾವಂತ ಹಾಗೂ ಉತ್ಸಾಹಭರಿತ ಸದಸ್ಯರನ್ನು ಹೊಂದಿದೆ.  ಕೂಟವು ಕಾರ್ಯಕ್ಷಮತೆಯುಳ್ಳ ಹೊಸಬರನ್ನು ಪ್ರತಿ ವರ್ಷವು ಬರಮಾಡಿಕೊಳ್ಳುತ್ತದೆ.

ಕನ್ನಡ ಕೂಟವು ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಿಂದ ಆಚರಿಸುತ್ತದೆ,

ಕನ್ನಡ ನುಡಿಯ ಮಹತ್ವ, ಕನ್ನಡ ನಾಡಿನ ಸಂಸ್ಕೃತಿಯನ್ನು ಪರಿಚಯಿಸಲಾಗುತ್ತದೆ. ಕನ್ನಡ ಹಬ್ಬವು ಜನರಲ್ಲಿ ಕನ್ನಡದ ಬಗೆಗಿನ ಅರಿವು ಮೂಡಿಸಲು ಬಹಳ ಸಹಕಾರಿಯಾಗಿದೆ. ನಮ್ಮ ನುಡಿಯ ಪರಂಪರೆಗೆ ಗೌರವ ನೀಡುವ ಸಲುವಾಗಿ ವಿವಿಧ ರೀತಿಯ ಕನ್ನಡದ ಕಲೆಗಳನ್ನು ಪ್ರದರ್ಶಿಸಿ, ಇದರ ಮೂಲಕ ಕನ್ನಡದ ಮೇಲೆ ಅಭಿಮಾನ ಹಾಗೂ ಹೆಮ್ಮೆಯನ್ನು ಬೆಳೆಸುವಲ್ಲಿ ಕರ್ನಾಟಕ ರಾಜ್ಯೋತ್ಸವದ ಆಚರಣೆಯು ಬಹು ಮುಖ್ಯ ಪಾತ್ರ ವಹಿಸುತ್ತದೆ.

ಕನ್ನಡ ಕೂಟವು ನವೆಂಬರ್ ೨ರಂದು ಪಿಇಎಸ್ ವಿಶ್ವವಿದ್ಯಾಲಯದ ಆವರಣದಲ್ಲಿ ಅದ್ಧೂರಿಯಾಗಿ ಕರ್ನಾಟಕ ರಾಜ್ಯೋತ್ಸವ ೨೩ರ ಉದ್ಘಾಟನಾ ಸಮಾರಂಭವನ್ನು ಮತ್ತು ಬ್ಯಾನರ್ ಬಿಡುಗಡೆ ಮಾಡುವ ಮೂಲಕ ಕಲಾವಿದರ ಹೆಸರುಗಳನ್ನು ಅನಾವರಣ ಮಾಡಲಾಯಿತು. ಕರ್ನಾಟಕದ ಬಾವುಟವನ್ನು ಹಾರಿಸಿ ನಾಡಗೀತೆಯನ್ನು ಹಾಡುವುದರ ಮೂಲಕ ಆರಂಭಿಸಿ 'ಗೊಂಬೆ ಕುಣಿತ' ಮತ್ತು 'ತಮಟೆ' ಪ್ರದರ್ಶನಗಳೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.

ನವೆಂಬರ ೬ರಂದು ನಾಡಹಬ್ಬ ದಸರಾ ಪ್ರಯುಕ್ತ ನಡೆದ 'ಗೊಂಬೆ ಪ್ರದರ್ಶನ' ನೋಡುಗರ ಮನಸೆಳೆಯಿತು. ಪೌರಾಣಿಕ ಕಥಾ ಪ್ರಸಂಗಗಳ ಗೊಂಬೆಗಳಿಂದ ಹಿಡಿದು ದೇವತೆಗಳ, ಸಾಧು-ಸಂತರ ಮಣ್ಣಿನ ಗೊಂಬೆಗಳು ನವರಾತ್ರಿ ವೈಭವವದ ಮೆರುಗನ್ನು ಮೂಡಿಸಿತ್ತು.

ನವೆಂಬರ್ ೭ರಂದು ನಡೆದ 'ಜನಪದ ಜಾತ್ರೆ' ಕಾರ್ಯಕ್ರಮವು ಹಾಡು ಕುಣಿತ ಗಳಿಂದ ನಾಡಿನ ಜನಪದ ಸೊಗಡಿನ ಪರಿಚಯವನ್ನು ನೆರೆದವರಿಗೆ ಮಾಡಿಸಿಕೊಟ್ಟಿತು. ಜನಪದ ಹಾಡುಗಳ ಜುಗಲ್ ಬಂದಿಯ ಜೊತೆಗೆ ಯಕ್ಷಗಾನ ಪ್ರದರ್ಶನ ಮತ್ತು ಕೂಟದ ವಿದ್ಯಾರ್ಥಿಗಳ ನೃತ್ಯವು ಪ್ರೇಕ್ಷಕರ ಮನತಣಿಸಿತು.

೮ ನೇ ನವೆಂಬರ್ ಅಂದು ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬರೆದ ಕವನ ಸಂಕಲನವಾದ 'ಹೆಣ್ಣು' ಪುಸ್ತಕದ ಬಿಡುಗಡೆ ಹಾಗೂ ನಗೆ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ವಿಶೇಷ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕನ್ನಡದ ಪ್ರಸಿದ್ಧ ನಟಿ ಮತ್ತು  ದೂರದರ್ಶನ ನಿರೂಪಕಿ   ಶ್ವೇತಾ ಶ್ರೀವಾತ್ಸವ,  ನಟಿ ಅಪರ್ಣ ವಸ್ತಾರೇ ಹಾಗೂ ಪ್ರಸಿದ್ಧ ಕಬಡ್ಡಿ ಆಟಗಾರ್ತಿ ಎಲ್ ಜಯಂತಿ ಅವರು ಆಗಮಿಸಿದ್ದರು.ಅವರ ಉಪಸ್ಥಿತಿಯಲ್ಲಿ 'ಹೆಣ್ಣು' ಪುಸ್ತಕ ಬಿಡುಗಡೆಯು ಅದ್ಧೂರಿಯಾಗಿ ನೆರವೇರಿತು.ತದನಂತರ 'ಅಶ್ವಿನಿ ರವೀಂದ್ರ' ರವರಿಂದ ಹಾಸ್ಯ ಭರಿತವಾದ ನಗೆ ಸಂಜೆ ಕಾರ್ಯಕ್ರಮ ಜರುಗಿತು. ನಂತರ ಕನ್ನಡ ಕೂಟದ ಸಾಂಸ್ಕೃತಿಕ ಮತ್ತು ಪಾಶ್ಚಾತ್ಯ ನೃತ್ಯ ತಂಡಗಳ ನೃತ್ಯ ಪ್ರದರ್ಶನಗಳು, ದ್ರೌಪದಿ ವಸ್ತ್ರಾಪಹರಣದ ಪ್ರಸ್ತುತಿ ಮತ್ತು ಕರ್ನಾಟಕದ ಸಾಧಕಿಯರನ್ನು ಬಿಂಬಿಸುವ ಫ್ಯಾಷನ್ ಷೋ ಕಾರ್ಯಕ್ರಮಗಳು ನೆರೆದಿದ್ದ ಪ್ರೇಕ್ಷಕರೆಲ್ಲರ ಮನ ಸೆಳೆಯಿತು.

ನವೆಂಬರ್ ೯ರಂದು ಕಾಲೇಜಿನಲ್ಲಿ ಫ್ಲ್ಯಾಶ್ ಮೊಬ್ ಮತ್ತು ಅರಳಿ ಕಟ್ಟೆ ಕಾರ್ಯಕ್ರಮವನ್ನು ನಡೆಸಲಾಯಿತು. ಫ್ಲ್ಯಾಶ್ ಮಾಬ್ ನಲ್ಲಿ  ಕನ್ನಡದ ವಿವಿಧ ಚಲನಚಿತ್ರ ಹಾಡುಗಳಿಗೆ ಕಾಲೇಜಿನ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು. ನಂತರ ಅರಳಿ ಕಟ್ಟೆಯಲ್ಲಿ ವಿದ್ಯಾರ್ಥಿಗಳು ವೇದಿಕೆಯ ಮೇಲೆ ಬಂದು ತಮ್ಮ ಹಾಡು, ನೃತ್ಯ,ಕಥೆಗಳ ಮೂಲಕ ಎಲ್ಲರ ಮನ ಸೆಳೆದರು.

ನವೆಂಬರ್ ೧೧ನೇ ತಾರೀಕು ಖ್ಯಾತ ಹಾಡುಗಾರ ರಘು ದೀಕ್ಷಿತ್ ಮತ್ತು ತಂಡದಿಂದ ಮ್ಯೂಸಿಕಲ್ ಮುಸ್ಸಂಜೆ ಕಾರ್ಯಕ್ರಮ ಮತ್ತು ಡೀಜೆ ವಿನಯ್ ಅವರಿಂದ ಡೀಜೆ ನೈಟ್ ಕಾರ್ಯಕ್ರಮಗಳು ಬಹಳ ಅದ್ಧೂರಿಯಾಗಿ ನಡೆದವು.ಈ ಕಾರ್ಯಕ್ರಮಕ್ಕೆ ಪಿಇಎಸ್ ವಿಶ್ವವಿದ್ಯಾಲಯ ಅಷ್ಟೆ ಅಲ್ಲದೇ ಇತರೆ ಕಾಲೇಜುಗಳಿಂದ ಸಹ ವಿದ್ಯಾರ್ಥಿಗಳು ಆಗಮಿಸಿದ್ದರು.ಸುಮಾರು ೨೦೦೦‌ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ನೆರೆದಿದ್ದರು. ರಘು ದೀಕ್ಷಿತ್ ಅವರ ಹಾಡುಗಳಿಗೆ ಮೊದಲು ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು ನಂತರ ಅವರ ಮಧುರ ಧ್ವನಿಗೆ ಮನಸೋತು ಕಾರ್ಯಕ್ರಮವನ್ನ ಖುಷಿಯಿಂದ ಕಳೆದರು. ತದನಂತರ ವಿನಯ್ ಮ್ಯೂಸಿಕ್ ಅವರ ಡೀಜೆ ನೈಟ್ ನೆರೆದಿದ್ದವರಲ್ಲಿ ಜೋಶ್ ನೀಡಿ ಕುಣಿದು ಕುಪ್ಪಳಿಸುವಂತೆ ಮಾಡಿತು.ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿನಡೆಸಿ ರೋಮಾಂಚನ,ವಿಜೃಂಭಣೆ ತುಂಬಿದ್ದ ವಾರದುದ್ದದ ಕನ್ನಡ ಹಬ್ಬಕ್ಕೆ ಯಶಸ್ವಿಯಾಗಿ ತೆರೆ ಎಳೆಯಲಾಯಿತು.

ಕನ್ನಡ ಕೂಟ ಕಾರ್ಯಕ್ರಮವನ್ನು ಆಯೋಜಿಸಲು ಮಾನ್ಯ ಕುಲಾಧಿಪತಿಗಳಾದ ಡಾ. ಎಂ. ಆರ್. ದೊರೆಸ್ವಾಮಿ ಮತ್ತು ಪ್ರೊ. ಡಿ. ಜವಾಹರ್, ಸಮ-ಕುಲಾಧಿಪತಿಗಳು ಹಾಗೂ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಜೆ. ಸೂರ್ಯಪ್ರಸಾದ್ ಅವರು ನೀಡಿದ ಬೆಂಬಲ ಮತ್ತು ಪ್ರೋತ್ಸಾಹವನ್ನು ದಾಖಲಿಸಲು ಇಚ್ಛಿಸುತ್ತೇವೆ.

ಈ ಎಲ್ಲಾ ರಾಜ್ಯೋತ್ಸವದ ಕಾರ್ಯಕ್ರಮಗಳಲ್ಲಿ ಕುಲಸಚಿವರಾದ ಡಾ. ಕೆ. ಎಸ್. ಶ್ರೀಧರ್, ಡಾ. ವಿ. ಕೃಷ್ಣ (ವಿದ್ಯಾರ್ಥಿ ವ್ಯವಹಾರಗಳ ಮುಖ್ಯಸ್ಥರು), ಡಾ. ಕೇಶವನ್ ಬಿ.ಕೆ (ಇಂಜಿನಿಯರಿಂಗ್ ಮುಖ್ಯಸ್ಥರು) ಮತ್ತು ಪ್ರೊ.ಎಸ್.ವಿ. ವೆಂಕಟೇಶ್ (ಮುಖ್ಯಸ್ಥರು ಸಿವಿಲ್ ವಿಭಾಗ), ಡಾ. ಜಯಶ್ರೀ ಆರ್ (ಮುಖ್ಯಸ್ಥರು ಸಿಎಸ್ಇ-ಎಐಎಂಎಲ್ ವಿಭಾಗ), ಹಾಗೂ ಸಹಾಯಕ ಪ್ರಾಧ್ಯಾಪಕರಾದ ಪ್ರೊ.ವಾದಿರಾಜ ಎ ಮತ್ತು ಡಾ. ನಂದಾ ಎಂ ಎಲ್ ಭಾಗವಹಿಸಿ ಯಶಸ್ವಿಗೊಳಿಸಿದರು.